ಶುಕ್ರವಾರ, ಜನವರಿ 12, 2018

ಪರಿಸಂಖ್ಯಾ ಪರಿಚಯ

ಪರಿಸಂಖ್ಯಾ ಪರಿಚಯ

ವೇದದಲ್ಲಿರುವ ವಿಧಿವಾಕ್ಯಗಳ ಅರ್ಥವಿಶ್ಲೇಷಣೆಗಾಗಿ ಪೂರ್ವಮೀಮಾಂಸಶಾಸ್ತ್ರದಲ್ಲಿ ಅನೇಕಾನೇಕನ್ಯಾಯಗಳನ್ನು, ಕಟ್ಟಳೆಗಳನ್ನು ನಿಗದಿಪಡಿಸಿದ್ದಾರೆಈ ಕಟ್ಟಳೆಗಳ ಪೈಕಿ ಪರಿಸಂಖ್ಯಾವಿಧಿ ಎಂಬುದೂ ಒಂದುಪರಿಸಂಖ್ಯೆಯ ಸ್ವರೂಪ ಕೊಂಚ ತೊಡಕಿನದುಮೇಲ್ನೋಟದ ಓದಿನಲ್ಲಿ ಅದು ನಮೆಗೆ ಕಾಣಿಸಿಕೊಳ್ಳುವುದೇ ಇಲ್ಲಗುರುಮುಖದ ಅಧ್ಯಯನ ಹಾಗೂ ಆರೆಂಟು ಉದಾಹರಣೆಗಳನ್ನು ಮನಗಂಡು ಅವುಗಳ ಸ್ವರೂಪ ಹಾಗೂ ಅರ್ಥವಿಶೇಷಗಳನ್ನು ಮನಸ್ಸಿಗೆ ತಂದುಕೊಂಡು ಚೆನ್ನಾಗಿ ಮೆಲುಕು ಹಾಕಿದಾಗ ಮಾತ್ರ ಪರಿಸಂಖ್ಯೆಯನ್ನು ಅರಿತುಕೊಳ್ಳಲು ಸಾಧ್ಯಇಷ್ಟಾದರೂ ಕೂಡ ಬೇರೆ ಬೇರೆ ಸಂದರ್ಭಗಳಲ್ಲಿ ಪ್ರಯುಕ್ತವಾಗಿರುವ ಪರಿಸಂಖ್ಯೆಯ ಪರಿಚಯವು ಮೇಲ್ನೋಟದ ಸಾಮಾನ್ಯವಾದ ಓದಿಗೆ ಒಮ್ಮೆಲೇ ನಮ್ಮ ಗಮನಕ್ಕೆ ಬಂದೀತೆಂದು ಹೇಳಲಾಗದುಕೊಂಚ ಕುರಿತೋದಿದಾಗ ಮಾತ್ರ ಅದು ನಮಗೆ ಮನವರಿಕೆಯಾದೀತು ಅಷ್ಟೇಪೂರ್ವೊತ್ತರಮೀಮಾಂಸಶಾಸ್ತ್ರಗಳಲ್ಲೂ ಧರ್ಮಶಾಸ್ತ್ರದಲ್ಲೂ ಕೂಡ ಈ ಪರಿಸಂಖ್ಯೆಯ ಪ್ರಯೋಗ ವ್ಯವಹಾರಗಳು ಹೆಚ್ಚಾಗಿ ಕಂಡುಬರುತ್ತವೆಇತರ ಶಾಸ್ತ್ರಗಳಲ್ಲೂ ಕೂಡ ಅಪರೂಪವಾಗಿ ಪರಿಸಂಖ್ಯೆಯ ಬಳಕೆ ಇದ್ದೇ ಇದೆ.

ಪರಿಸಂಖ್ಯಾ ಸ್ಥಳದಲ್ಲಿ ಪ್ರಯುಕ್ತವಾದ ಪದಗಳ ಮೇರೆಗೆ ವಿಧಿರೂಪದ ಅರ್ಥವೇ ವಾಚ್ಯವಾಗಿ ತೋರಿಬರುತ್ತದೆಹಾಗಿದ್ದರೂ ಈ ವಾಚ್ಯಾರ್ಥವು ಅಲ್ಲಿ ಆಗಲೇ ಇನ್ನಾವುದೋ ಬಗೆಯಲ್ಲಿ ಪ್ರಾಪ್ತವೇ ಆಗಿರುತ್ತದೆಯಾದ್ದರಿಂದ ಪುನಃ ವಿಧಿಗೆ ವಿವಕ್ಷೆಯಿಲ್ಲಬದಲಾಗಿ ವಾಚ್ಯಾರ್ಥಕ್ಕೆ ಸಂಬಂಧಿಸಿದ, ಯಾವುದೋ ಬಗೆಯಲ್ಲಿ ಅಲ್ಲಿ ಉಪಸ್ಥಿತವಾಗುವ ಇನ್ನೊಂದು ಅರ್ಥವನ್ನು (ಕ್ರಿಯೆಯನ್ನು) ನಿಷೇಧಿಸುವುದೇ ಪರಿಸಂಖ್ಯೆಯ ಉದ್ದೇಶ ಎಂದು ಹೇಳುತ್ತಾರೆ. ನಿಷೇಧವು ಅಲ್ಲಿರುವ ಪದಗಳಿಂದ ವಾಚ್ಯವಲ್ಲದ್ದರಿಂದ ಲಕ್ಷಣಾವೃತ್ತಿಯ ಮೂಲಕ ಆ ಅರ್ಥವನ್ನು ಗ್ರಹಿಸಬೇಕುಹೀಗೆ ಈ ಲಾಕ್ಷಣಿಕಪರಿಸಂಖ್ಯಾಸ್ಥಳದಲ್ಲಿ ಶ್ರುತಹಾನಿ ಅಶ್ರುತಕಲ್ಪನಾ ಪ್ರಾಪ್ತಬಾಧ ಎಂಬ ಮೂರು ದೋಷಗಳು ಗಂಟುಬೀಳುತ್ತವೆವಾಕ್ಯಾರ್ಥನಿರ್ವಾಹವೇ ಮಹಾಪ್ರಯೋಜನವಾದುದರಿಂದ ಈ ದೋಷ ಅನಿವಾರ್ಯ ಎಂದು ಹೇಳುತ್ತಾರೆ.

ತೈತ್ತರೀಯ ಶಿಕ್ಷಾವಲ್ಲಿಯಲ್ಲಿ ಸತ್ಯಂವದ ಧರ್ಮಂಚರ ಎಂಬೀ ವಾಕ್ಯಗಳಿವೆಸತ್ಯವನ್ನು ನುಡಿ, ಧರ್ಮವನ್ನು ಆಚರಿಸು ಎಂಬುದಾಗಿ ಇಲ್ಲಿ ನೇರವಾದ ಅರ್ಥವನ್ನು ನಾವು ಗ್ರಹಿಸುತ್ತೇವೆಈ ಅರ್ಥಗಳು ಲೋಕವ್ಯವಹಾರದಿಂದಲೇ ತಿಳಿದು ಬರುತ್ತವೆಯಾಗಿ ಪುನ: ವಿಧಿಯು ಬೋಧಿಸಬೇಕಾದ ಅಗತ್ಯವಿಲ್ಲಆದರೆ ಲೋಕದಲ್ಲಿ ಸ್ವೇಚ್ಛಾಪ್ರವೃತ್ತಿಯಿಂದಾಗಿ ಸುಳ್ಳಾಡುವಿಕೆ, ಅಧರ್ಮಾಚರಣೆಗಳಲ್ಲಿ ಜನರು ಪ್ರವೃತ್ತರಾಗುವ ಸಂಭವವಿದೆಅದನ್ನು ತಡೆಗಟ್ಟಲು ನಿಷೇಧವು ಅಪೇಕ್ಷಿತಆದ್ದರಿಂದ ಸತ್ಯಂವದ ಧರ್ಮಂಚರ ಎಂಬ ವಾಕ್ಯಗಳಿಗೆ ಲಕ್ಷಣಯಾ ಅಸತ್ಯಂ ಮಾ ವದ’ ‘ಅಧರ್ಮಂ ಮಾ ಚರಎಂಬುದಾಗಿ ನಿಷೇಧವೇ ವಿವಕ್ಷಿತವೆಂದು ಹೇಳುತ್ತಾರೆ.  “ಆತ್ಮಾವಾ ಅರೇ ದ್ರಷ್ಟವ್ಯಃ ಶ್ರೋತವ್ಯೋ ಮಂತವ್ಯೋ ನಿಧಿಧ್ಯಾಸಿತವ್ಯಎಂಬೀ ಉಪನಿಷದ್ ವಾಕ್ಯದಲ್ಲೂ ಪರಿಸಂಖ್ಯೆಯನ್ನು  ಹೇಳುತ್ತಾರೆನಿಷೇಧವನ್ನು ತಿಳಿಸುವ ಪದಗಳು ಇಲ್ಲಿ ಪ್ರಯುಕ್ತವಾಗಿಲ್ಲಲಕ್ಷಣಯಾ ಗ್ರಹಿಸಬೇಕುಸಾಮಾನ್ಯರಿಗೆ ಇದು ಕೊಂಚ ಕ್ಲಿಷ್ಟ. ಪರಿಸಂಖ್ಯಾವಾಕ್ಯದಲ್ಲಿ ವಾಚ್ಯವಾಗಿ ತೋರುವ ಕ್ರಿಯೆಗೆ ವಿರುದ್ಧವಾದ ಕ್ರಿಯೆಯ ನಿಷೇಧವು ಲಕ್ಷಣಯಾ ಗೃಹೀತವಾಗುತ್ತದೆ.   ಸತ್ಯಂವದ ಎಂಬಲ್ಲಿ ಸುಳ್ಳು ಆಡಬೇಡ ಎಂಬ ಅರ್ಥವು ವಿವಕ್ಷಿತಕ್ರಿಯಾನಿಷೇಧವೆನಿಸುವಂತಿದ್ದರೂ ಆ ಕ್ರಿಯೆಗೆ ಅಶ್ರಯವಾದ ದ್ರವ್ಯ, ಗುಣಗಳೂ ಅಲ್ಲಿ ಇರಲೇಬೇಕು. ಪ್ರಕೃತಕ್ಕೆ ಸಂಬಂಧಪಟ್ಟಂತೆ ಎರಡು ವಿಷಯಗಳು (ದ್ರವ್ಯಗುಣಕ್ರಿಯಾರೂಪ) ಒಟ್ಟಿಗೆ ಪ್ರಾಪ್ತವಾದಾಗ, ತೋರಿಬಂದಾಗ ಒಂದನ್ನು ನಿಷೇಧಿಸುವುದೇ ಪರಿಸಂಖ್ಯೆವಿಂಗಡಿಸು, ಬೇರ್ಪಡಿಸು, ಕೈಬಿಡು, ಬದಿಗಿಡು, ತಿರಸ್ಕರಿಸು, ನಿಷೇಧಿಸು ಎಂಬೀ ಬಗೆಯಲ್ಲಿ ಪರಿಸಂಖ್ಯೆಯನ್ನು ಪರಿಚಯಿಸಬಹುದುಎರಡರಲ್ಲಿ ಒಂದನ್ನು ನಿಷೇಧಿಸು ಎಂದರ್ಥನಿಷೇಧವನ್ನು ತಿಳಿಸುವ ಪದಗಳು ಪ್ರಯುಕ್ತವಾಗಿರುವುದಿಲ್ಲಾದ್ದರಿಂದ ಜನಸಾಮಾನ್ಯರ ಮೆಲ್ನೋಟದ ಓದಿಗೆ ಈ ಪರಿಸಂಖ್ಯೆಯ ಅರಿವಾಗುವುದು ಅಪರೂಪವೇ ಸರಿ.

ಪಂಚ ಪಂಚನಖಾ ಭಕ್ಷ್ಯಾ: (ವಾ. ರಾ. ಕಿಷ್ಕಿಂಧಾಕಾಂಡಃ 17-27) ಎಂಬೀ ವಾಕ್ಯವನ್ನು ಲಾಕ್ಷಣಿಕಪರಿಸಂಖ್ಯಾವಿಧಿಗೆ ಉದಾಹರಿಸುತ್ತಾರೆವಾಲಿವಧ ಸಂದರ್ಭದಲ್ಲಿ ವಾಲಿಯು ಶ್ರೀರಾಮನಿಗೆ ಹೇಳಿದ ಮಾತಿದುಈ ವಾಕ್ಯದಲ್ಲಿ ಮೇಲ್ನೋಟಕ್ಕೆ ನಿಷೇಧವೇನೂ ತೋರುವುದಿಲ್ಲ.  “ಮಾಂಸಾಹಾರಿಗಳು ಇಲ್ಲಿ ಹೆಸರಿಸಿದ ಐದುಗುರಿನ ಐದು ಪ್ರಾಣಿಗಳನ್ನು ತಿನ್ನಬಹುದುಎಂಬುದಿಲ್ಲಿ ನಮಗೆ ತೋರುವ ಸರಳ ಅರ್ಥಆದರೆ ಈ ಅರ್ಥಕ್ಕೆ ಇಲ್ಲಿ ವಿವಕ್ಷೆ ಇಲ್ಲಯಾಕೆಂದರೆ ರಾಗತಃ ಪ್ರಾಪ್ತವಾಗುವ ಮಾಂಸಭಕ್ಷಣಕ್ಕೆ ವಿಧಿಯ ಅವಶ್ಯಕತೆ ಇಲ್ಲಆದರೆ ಇಲ್ಲಿ ಹೆಸರಿಸದೇ ಇರುವ ಇನ್ನೂ ಹಲವು ಐದುಗುರಿನ ಪ್ರಾಣಿಗಳಿವೆಅವುಗಳ ಮಾಂಸಭಕ್ಷಣೆಯಲ್ಲೂ ಕದಾಚಿತ್ ಆಶೆಯುಂಟಾಗಬಹುದುಅದನ್ನು ನಿಷೇಧಿಸುವದಕ್ಕೋಸ್ಕರ ಈ ವಾಕ್ಯ ಹೊರಟಿದೆ.  “ಈ ಹೇಳಿದ ಐದುಗುರಿನ ಐದು ಪ್ರಾಣಿಗಳ ಹೊರತಾಗಿ ಇನ್ನುಳಿದ ಐದುಗುರಿನ ಪ್ರಾಣಿಗಳನ್ನು ತಿನ್ನಬಾರದುಎಂಬಂತಹ ನಿಷೇಧವು  ಪಂಚ ಪಂಚನಖಾ ಭಕ್ಷ್ಯಾ: ಎಂಬೀ ವಾಕ್ಯದ ಅರ್ಥವು ಕೊಂಚ ತೊಡಕಿನದ್ದಾದ್ದರಿಂದ ಕೆಲವೊಮ್ಮೆ ನಾವು ಮೇಲ್ನೋಟದ ಅರ್ಥವನ್ನು ಮಾತ್ರ ಗ್ರಹಿಸಿ ಮುಂದೆ ಹೋಗಿಬಿಡುತ್ತೇವೆ.

ಕನ್ನಡದಲ್ಲೂ ಪರಿಸಂಖ್ಯಾ ಪ್ರಯೋಗಗಳು ಇರಬಹುದುನಾನು ನೋಡಿದ ಒಂದು ಪ್ರಯೋಗವನ್ನು ಮಾತ್ರ ಇಲ್ಲಿ ಉದಾಹರಿಸಬಯಸುತ್ತೇನೆ.

ಧ್ವನಿಯೆಂಬುದಳಂಕಾರಂ
ಧ್ವನಿಯಿಸುಗುಂ ಶಬ್ದದಿಂದಂ। ಅರ್ಥದೆ ದೂಷ್ಯಂ।
ನೆನೆವುದಿದನಿಂತು ಕಮಲದೊಳ್
ಅನಿಮಿಷಯುಗಮೊಪ್ಪಿತೊರ್ಪುದಿಂತಿದು ಚೋದ್ಯ್ಂ॥    ಕರಾಮಾ 3-209

ಸಂಸ್ಕೃತದ ಧ್ವನಿಕಾವ್ಯಲಕ್ಷಣಕಾರಿಕೆಯು ಮಾರ್ಗಕಾರನ ಧ್ವನಿಕಂದಕ್ಕೆ ಪ್ರೇರಣೆಯನ್ನೊದಗಿಸಿದೆ. ಧ್ವನಿಕಾವ್ಯಲಕ್ಷಣದ ಅರ್ಥವನ್ನು ಮನಸ್ಸಿಗೆ ತಂದುಕೊಳ್ಳದಿದ್ದರೆ  ಧ್ವನಿಕಂದವು ಅರ್ಥವಾಗುವುದೇ ಇಲ್ಲಆದ್ದರಿಂದ ಧ್ವನಿಕಂದದ ಓದಿಗೆ ಹಿನ್ನೆಲೆಯಾಗಿ ಧ್ವನಿಕಾವ್ಯಲಕ್ಷಣಕಾರಿಕೆಯ ಅರ್ಥವನ್ನು ಮನಸ್ಸಿಗೆ ತಂದುಕೊಳ್ಳಬೇಕಾದುದು ಅನಿವಾರ್ಯಧ್ವನಿಕಾವ್ಯಲಕ್ಷಣವಾಕ್ಯ ಹೀಗಿದೆ : --

ಯತ್ರಾರ್ಥಃ ಶಬ್ದೋ ವಾ ತಮರ್ಥಮುಪಸರ್ಜನೀಕೃತಸ್ವಾರ್ಥೌ।
ವ್ಯಂಕ್ತಃ ಕಾವ್ಯವಿಶೇಷಃ ಸ ಧ್ವನಿರಿತಿ ಸೂರಿಭಿಃ ಕಥಿತಃ ॥
-      ಧ್ವನ್ಯಾಲೋಕಃ  1-13

ಶಬ್ದದಂತೆಯೇ ಅರ್ಥವೂ ಕೂಡ ವ್ಯಂಜನಾವೃತ್ತಿಯ ಮೂಲಕ ಅರ್ಥಾಂತರವನ್ನು ಧ್ವನಿಸುತ್ತದೆಅರ್ಥಃ ತಮರ್ಥಂ ವ್ಯನಕ್ತಿ ಎಂಬುದಾಗಿ ಈ ಮೇಲಿನ ಧ್ವನಿಕಾವ್ಯಲಕ್ಷಣವಾಕ್ಯದಲ್ಲಿ ಹೇಳಿದೆ. ಇದು ಧ್ವನಿ ಪ್ರಸ್ಥಾನದ ಸಿದ್ಧಾಂತಧ್ವನಿ ಪ್ರಸ್ಥಾನವು ವಿದ್ವಲ್ಲೋಕದಲ್ಲಿ ಮಾನ್ಯವಾಗುವವರೆಗೂ ಕೂಡ ಅರ್ಥಃ ಅರ್ಥಾಂತರಂ ವ್ಯನಕ್ತಿ ಎಂಬ ಮಾತು ವಿದ್ವತ್ ಪ್ರಪಂಚದಲ್ಲಿ ಗ್ರಾಹ್ಯವಾಗಿರಲಿಲ್ಲ. ಶಬ್ದವು ಮಾತ್ರವೆ ಅರ್ಥಬೋಧಕ ಅರ್ಥಪ್ರತ್ಯಾಯಕ ಎಂಬುದೇ ರೂಢಿಯಾಗಿತ್ತು.

ನ ಸೋsಸ್ತಿ ಪ್ರತ್ಯಯೋ ಲೋಕೇ ಯಃ ಶಬ್ದಾನುಗಮಾದೃತೇ।
ಅನುವಿದ್ಧಮಿವ ಜ್ಞಾನಂ ಸರ್ವಂ ಶಬ್ದೇನ ಭಾಸತೇ॥
--ಭರ್ತೃಹರಿಃ ವಾಕ್ಯಪದೀಯ

ಅರಿವೆಲ್ಲಕ್ಕೂ ನುಡಿಯ ಹಿನ್ನೆಲೆ ಬೇಕೇ ಬೇಕು ಎಂಬುದು ಶಾಸ್ತ್ರದ ಕಟ್ಟಳೆಅದನ್ನು ಮೀರಿ ಇದೀಗ ಧ್ವನಿ ಪ್ರಸ್ಥಾನವು (ಕ್ರಿಸ್ತ ಶಕ - 900) ಅರ್ಥವೂ ಕೂಡ ವ್ಯಂಜನಾವೃತ್ತಿಯ ಮೂಲಕ ಅರ್ಥಾಂತರವನ್ನು ತಿಳಿಸುತ್ತದೆ, ಧ್ವನಿಸುತ್ತದೆ ಎಂಬ ಅಭಿಪ್ರಾಯವನ್ನು ಮಂಡಿಸಹೊರಟಾಗ ಕೆಲವರಿಗೆ ಅದು ಹಿಡಿಸಲಿಲ್ಲ. ಮುಖ್ಯವಾಗಿ ಶಬ್ದ ಅರ್ಥ ಎರಡರಲ್ಲೂ ವ್ಯಂಜನಾ ಎಂಬ ವೃತ್ತಿಯೋಂದನ್ನು ಹೊಸದಾಗಿ ಕಲ್ಪಿಸಹೊರಟದ್ದು ಕೆಲವರ ತಕರಾರಿಗೆ ಕಾರಣವಾಯಿತುಅಭಿಧಾ ಲಕ್ಷಣಾ ಎಂಬೀ ಎರಡು ಶಬ್ದವೃತ್ತಿಗಳನ್ನು ಶಾಸ್ತ್ರಕಾರರೆಲ್ಲರೂ ಒಪ್ಪಿದ್ದಾರೆಆ ಎರಡು ವೃತ್ತಿಗಳಿಂದಲೇ ಕಾವ್ಯದಲ್ಲೂ ಕೂಡ ವ್ಯವಹಾರ ನಿರ್ವಾಹವಾಗುತ್ತಿರುವಾಗ ಇದೀಗ ಹೊಸದಾಗಿ ಕಲ್ಪಿಸಿದ ವ್ಯಂಜನಾವೃತ್ತಿಯಿಂದ ಆಗಬೇಕಾದ್ದೇನೂ ಇಲ್ಲ ಎಂಬುದಾಗಿ ವಿದ್ವಾಂಸರು ಕೆಲವರು ವ್ಯಂಜನಾವೃತ್ತಿಯ ಬಗೆಗೆ ಅಸಹನೆಯನ್ನು ವ್ಯಕ್ತಪಡಿಸಿದರು. ಧ್ವನಿವಿರೋಧ  ಧ್ವನಿವಿರೋಧಿಗಳು ಎಂಬ ಮಾತಿಗೆ ವ್ಯಂಜಾನವೃತ್ತಿಯ ಬಗೆಗೆ ಅಸಹನೆ ಎಂದಿಷ್ಟೇ ಅರ್ಥಮಾರ್ಗಕಾರನೂ ಕೂಡ ವ್ಯಂಜನಾವೃತ್ತಿಯ ಬಗೆಗೆ ಅಸಹನೆಯನ್ನು ತಾಳಿದವನು. ಅವನು ಅಂತರ್ಭಾವವಾದಿ.  ‘ಧ್ವನಿ ಎಂಬುದು ಬೇರೆ ಬೇರೆ ಅರ್ಥಾಲಂಕಾರಗಳಲ್ಲೇ ಅಡಕವಾಗುವ ಧರ್ಮವೇ ಹೊರತು ಅಲಂಕಾರಗಳಿಗಿಂತ ಬೇರೇನೂ ಅಲ್ಲ ಎಂಬುದು ಮಾರ್ಗಕಾರನ ನಿಲುವು.

ಉಭಯಸ್ಯ ಯುಗಪತ್ ಪ್ರಾಪ್ತೌ ಇತರವ್ಯಾವೃತ್ತಿಪರೋ ವಿಧಿಃ ಪರಿಸಂಖ್ಯಾ. ಧ್ವನಿಕಾವ್ಯಲಕ್ಷಣವಾಕ್ಯದಿಂದ ಕಾವ್ಯಾರ್ಥಪ್ರತಿಪತ್ತಿಯಲ್ಲಿ ಶಬ್ದಧ್ವನನ ಅರ್ಥಧ್ವನನ ಎಂಬೀ ಎರಡು ಕ್ರಿಯೆಗಳು ಅವಿಶೇಷವಾಗಿ ಒಟ್ಟಿಗೆ ಪ್ರಾಪ್ತವಾದವು. ಇದಕ್ಕೆ ಧ್ವನಿಯಿಸುಗುಂ ಶಬ್ದದಿಂದಂಅಂದರೆ ಅರ್ಥದಿಂದಲ್ಲಎಂಬುದಾಗಿ ಮಾರ್ಗಕಾರನ ಪ್ರತಿಕ್ರಿಯೆಶಬ್ದಅರ್ಥಗಳು ಪಾರ್ವತೀಪರಮೇಶ್ವರರಂತೆ ಒಂದಕ್ಕೊಂದು ಅಂಟಿಕೊಂಡೇ ಇರುವ ಪದಾರ್ಥಗಳು.  “ಏಕಸಂಬಂಧಿಜ್ಞಾನಂ ಅಪರಸಂಬಂಧಿಸ್ಮಾರಕಂ” “ಧ್ವನಿಯಿಸುಗುಂ ಶಬ್ದದಿಂದಎಂಬಲ್ಲಿ ಈ ಬಗೆಯ ಶಾಸ್ತ್ರಪರಿಭಾಷೆಯ ಪರಿಚಯವುಳ್ಳ ಓದುಗರಿಗೆ ಅರ್ಥದ ನೆನಪು ಕಡ್ಡಾಯವಾಗಿ ಆಗಲೇಬೇಕುಪರಿಸಂಖ್ಯೆಗೆ ನಿಷೇಧವೇ ವಾಕ್ಯಾರ್ಥಮುಂದಿನ ವಾಕ್ಯವು ಪರಿಸಂಖ್ಯೆಯ ಸಮರ್ಥಕಇಲ್ಲಿ ಶಬ್ದಗಳ ಸನ್ನಿವೇಶವೇ ಅನ್ವಯಸಾಮಗ್ರಿಯನ್ನು ನೆನೆಪಿಸಿಕೊಡುತ್ತದೆಸಾಹಚರ್ಯವು ಧ್ವನಿಕಾವ್ಯಲಕ್ಷಣವಾಕ್ಯನ್ನು ನೆನೆಪಿಸಿಕೊಡುತ್ತದೆಇದು ಭಾರತೀಯರ ವಾಕ್ಯಾರ್ಥವಿಶ್ಲೇಷಣೆಯ ಸರಣಿ.

ಕೆಲವೊಮ್ಮೆ ವಾಕ್ಯದಲ್ಲಿ ಕ್ರಿಯಾಪದವು ಪ್ರಯುಕ್ತವಾಗಿರದಿದ್ದರೆ ಪದ ಪದಾರ್ಥಗಳ ಆಕಾಂಕ್ಷೆಗನುಗುಣವಾಗಿ ಹಿಂದಿನ ವಾಕ್ಯದಲ್ಲಿರುವ ಕ್ರಿಯಾಪದವನ್ನು ಮುಂದಿನ ವಾಕ್ಯದಲ್ಲೂ ಅನ್ವಯಿಸಿಕೊಳ್ಳಬೇಕಾಗುತ್ತದೆಆಕಾಂಕ್ಷಾ ಯೋಗ್ಯತಾ ಸನ್ನಿಧಿಯೆಂಬಿವುಗಳಿಗೆ ಅನ್ವಯಸಾಮಗ್ರಿ ಎಂಬ ಹೆಸರುಧ್ವನಿಕಂದದ ಅರ್ಥದೆ ದೂಷ್ಯಂಎಂಬಲ್ಲಿ ಕ್ರಿಯಾಪದವಿಲ್ಲಅರ್ಥದೆ ಎಂಬೀ ತೃತೀಯಾಂತಪದಕ್ಕೆ ಕ್ರಿಯಾಪದದ ಆಕಾಂಕ್ಷೆಯಿದೆಹಿಂದಿನ ವಾಕ್ಯದಲ್ಲಿ ಧ್ವನಿಯಿಸುಗುಂ ಕ್ರಿಯಾಪದವಿದೆಅರ್ಥದೆಗೆ ಅದರಲ್ಲಿ ಅನ್ವಯಿಸುವ ಯೋಗ್ಯತೆ ಇದೆಎರಡು ವಾಕ್ಯಗಳೂ ಒಂದಕ್ಕೊಂದು ತಾಗಿ ಇರುವುದರಿಂದ ಸನ್ನಿಧಿಯೂ ಸಿದ್ಧವಾಗಿದೆ.  ‘ಎನೆಎಂಬ ಅಪೇಕ್ಷಿತಪದವೊಂದನ್ನು ಅಧ್ಯಾಹಾರಮಾಡಿಕೊಡು ಅರ್ಥದೆಯುಂ ಧ್ವನಿಯಿಸುಗಮೆನೆ ದೂಷ್ಯಂ ಎಂಬೀ ರೀತಿಯಲ್ಲಿ ವಾಕ್ಯದ ಆಕಾರ ಸಿದ್ಧವಾಯಿತುದೂಷ್ಯವೆಂದರೆ ಸರಿಯಲ್ಲ, ತಪ್ಪು ಎಂದರ್ಥದುಷ- ವೈಚಿತ್ಯೆ. ವೈಚಿತ್ಯಂ ವಿಕ್ಲವಃ ಬ್ರಾಂತಿಃ ಇತ್ಯಾದಿ, ಅನ್ವಯಸಾಮಗ್ರಿಯನ್ನು ಅನ್ವಯಿಸಿಕೊಳ್ಳಬೇಕಾದ ವಾಕ್ಯದ ಸ್ಥಳದಲ್ಲಿ ಓದುಗನಿಗೆ ಆಯಾ ಸಾಮಗ್ರಿಯ ನೆನಪಾಗಬೇಕಾದುದು ಅವಶ್ಯಕಮೇಲ್ನೋಟದ ಓದಿನಲ್ಲಿ ಅನ್ವಯ ಸಾಮಗ್ರಿಯ ನೆನಪಾಗದಿದ್ದಿರೆ ವಾಕ್ಯದ ಅರ್ಥವನ್ನು ನಾವು ಎಡವಟ್ಟಾಗಿ ಗ್ರಹಿಸಿಬೆಡುತ್ತೇವೆ.

ವಾಕ್ಯವೊಂದರ ಅರ್ಥವು ಸಂಧಿಗ್ಧವೆನಿಸಿದಾಗ ಪ್ರಕೃತಕ್ಕೆ ವಿವಕ್ಷಿತವಾದ ಅರ್ಥವನ್ನು ಇದಮಿತ್ಥಂ ಎಂದು ಕಂಡುಕೊಳ್ಳುವಲ್ಲಿ ಸುಳುಹು ನೀಡಬಲ್ಲ ಕೆಲವು ಕೈಮರಗಳನ್ನು ಕಾವ್ಯಮೀಮಾಮಂಸೆಯಲ್ಲಿ ಸಂಯೋಗೋ ವಿಪ್ರಯೋಗಶ್ಟ..! ಎಂಬುದಾಗಿ ತೋರಿಸಿದ್ದಾರೆಅಂತಹ ಕೈಮರಗಳ  ಪೈಕಿ ಒಂದಾದ ಸಾಹಚರ್ಯವೆಂಬುದು ಧ್ವನಿಕಂದದಲ್ಲಿದೆಶಬ್ದಗಳ ಸನ್ನಿವೇಶವಿಶೇಷರೂಪದ ಈ ಸಾಹಚರ್ಯವು ಧ್ವನಿಕಂದದ ಅರ್ಥವನ್ನು ಕಂಡುಕೊಳ್ಳುವಲ್ಲಿ ವಿಶೇಷಸ್ಮೃತಿಹೇತುವಾಗಿ ಸರಿಯಾದ ಸಾಕ್ಷ್ಯಧಾರವನ್ನು ಒದಗಿಸಿಕೊಡುತ್ತದೆ.

ಶಬ್ದ ಅರ್ಥ ಧ್ವನಿ ಎಂಬೀ ಮೂರು ನುಡಿಗಳ ಹೆಣಿಗೆಯಿಂದ ಧ್ವನಿಕಂದವು ರೂಪುಗೊಂಡಿದೆಈ ಕಂದವನ್ನು ಓದುವವನಿಗೆ  ಧ್ವನಿಕಾವ್ಯದಲಕ್ಷಣದ ಪರಿಚಯವಿದ್ದರೆ ಇದೇ ಮೂರು ಶಬ್ದಗಳ ಜೋಡಣೆಯುಳ್ಳ ಯತ್ರಾರ್ಥಃ ಶಬ್ದೋವಾ….” ಎಂಬ ಸಂಸ್ಕೃತದ ವಾಕ್ಯವು ನೆನಪಾಗಲೇಬೇಕುನೆನಪಾದದ್ದಾದರೆ ಎರಡೂ ವಾಕ್ಯಗಳ ಅರ್ಥಗಳಿಗೆ ತಾಳೆ ಹಾಕಿ ನೊಡಿದರೆ ಈ ಎರಡೂ ವಾಕ್ಯಗಳಿಗೆ ಪರಸ್ಪರ ಮಹತ್ವದ ಸಂಬಂಧವಿದೆಯೆಂಬ ಅಂಶ ತಿಳಿದುಬರುತ್ತದೆಧ್ವನಿಕಾವ್ಯಲಕ್ಷಣದಲ್ಲಿರುವ ಅರ್ಥಃ ತಮರ್ಥಂ ವ್ಯನಕ್ತಿ ಎಂಬೀ ಉಕ್ತಿಗೆ ಪ್ರತಿಯಾಗಿ ಮಾರ್ಗಕಾರನು ಧ್ವನಿಯಿಸುಗುಂ ಶಬ್ದದಿಂದಂ ಎಂಬುದಾಗಿ ತನ್ನ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾನೆಂಬುದನ್ನು ಸಾಹಚರ್ಯನಿಯಮದ ಮೇರೆಗೆ ಕಂಡುಕೊಳ್ಳಬಹುದು.

ಶ್ರೀ ವಿಜಯನ ಕವಿರಾಜಮಾರ್ಗವು ಕ್ರಿಸ್ತ ಶಕ 850-877 ಅವಧಿಯಲ್ಲಿ ರಚಿತವಾಗಿದೆಆನಂದವರ್ಧನನ ಧ್ವನ್ಯಾಲೋಕಗ್ರಂಥವೂ ಕೂಡ ಇದೇ ಅವಧಿಯಲ್ಲಿ ರಚಿತವಾಗಿರಬಹುದಾದರೂ ಕಾವ್ಯಮೀಮಾಂಸಕವಿದ್ವಾಂಸರಿಗೆ ಧ್ವನಿಯ ಪರಿಚಯವಾದುದು ಹತ್ತನೇ ಶತಮಾನದ ಆರಂಭದಲ್ಲಿ ಎಂದು ಸಂಶೋಧಕರು ಹೇಳುತ್ತಾರೆಇದ್ದರೂ ಇರಬಹುದುಮಾರ್ಗಕಾರನಿಗೆ ಧ್ವನಿಪ್ರಸ್ಥಾನದ ಸಮಗ್ರಪರಿಚಯ ಆಗಿರಲಿಲ್ಲವೆಂಬುದನ್ನು ಒಪ್ಪಲೇಬೇಕುಜೊತೆಯಲ್ಲಿ ಅವನು ಯತ್ರಾರ್ಥ ಶಬ್ದೋವಾ….” ಎಂಬೀ  ಧ್ವನಿ ಕಾವ್ಯಲಕ್ಷಣವನ್ನು ಕಂಡು- ಕೇಳಿ- ತಿಳಿದಿದ್ದ ಎಂಬುದನ್ನೂ ಒಪ್ಪಲೇಬೇಕಾಗಿದೆ.  “ಧ್ವನಿಯೆಂಬುದು ಅಲಂಕಾರಎಂದು ಹೇಳಿ ವ್ಯಂಜನಾವೃತ್ತಿಯನ್ನು ನಿರಾಕರಿಸುತ್ತಿರುವವನಿಗೆ ಧ್ವನಿಯ ಬಗೆಗೆ ಏನೂ ಗೊತ್ತಿರಲಿಲ್ಲ ಎಂದು ಹೇಳಲಾಗದು.

ಅರ್ಥಂ ಬುದ್ಧ್ವಾಶಬ್ದರಚನಾ” “ನಿಷೇಧಸ್ಯ ಪ್ರಾಪ್ತಿಪೂರ್ವಕತ್ವನಿಯಮಃಎಂಬೀ ಭಾರತೀಯ ಶಾಸ್ತ್ರಕಾರರ ಸಮ್ಮತಿಯ ಪ್ರಕಾರ ಹೇಳುವುದಾದರೆ ಮಾರ್ಗಕಾರಕನಿಗೆ ಧ್ವನಿಯ ಪರಿಚಯವು ಸ್ವಲ್ಪಮಟ್ಟಿಗಾದರೂ ಆಗಿರದಿದ್ದರೆ ಅವನು ಧ್ವನಿಕಂದವನ್ನು ರಚಿಸುವುದೇ ಅಸಂಭವ.

ಧ್ವನಿಕಂದವು ಶ್ರೀವಿಜಯನದೇ ಹೌದೆಂದಾದರೆ, ಭಾರತೀಯ ಕಾವ್ಯ- ಮೀಮಾಂಸೆಯ ಇತಿಹಾಸದಲ್ಲಿ ದಾಖಲಾಗುವ ಅರ್ಹತೆಯು ಅದಕ್ಕಿದೆಸಾಹಚರ್ಯ ಪರಿಸಂಖ್ಯಾಪ್ರಯೋಗ, ಅನ್ವಯಸಾಮಗ್ರಿಯ ಅಳವಡಿಕೆ, ನೆನೆಧಾತು ಪ್ರಯೋಗ ಇವು ಧ್ವನಿಕಂದದ ಅರ್ಥಗ್ರಾಹಕಸಾಮಗ್ರಿಯೆನಿಸುತ್ತವೆ. ಧ್ವನಿಕಂದದಲ್ಲಿ ಮಾರ್ಗಕಾರನು ಅಣಿಗೊಳಿಸಿಟ್ಟಿರುವ ಶಾಸ್ತ್ರೀಯತೆಯ ಈ ವಾಕ್ಯವಾಕ್ಯಾರ್ಥವಿಶ್ಲೇಷಣಸಾಮಗ್ರಿಯನ್ನು ನಾಡು ಗಮನಿಸಲೇ ಇಲ್ಲ!

ಮುಕುಲಭಟ್ಟ ಜಯಂತಭಟ್ಟರಿಬ್ಬರೂ ಕೂಡ ವ್ಯಂಜನಾವೃತ್ತಿಯನ್ನು ನಿರಾಕರಿಸುವ ಸಂದರ್ಭದಲ್ಲಿ ಮಾರ್ಗಕಾರನ ಮಾತನ್ನೇ ಸಂಸ್ಕೃತದಲ್ಲಿ ಅನುವಾದಿಸಿ ಹೇಳಿದಂತಿದೆಈ ಮೂವರ ಮೂರು ವಾಕ್ಯಗಳ ಆಶಯವನ್ನು ಹೊಸಗನ್ನಡದಲ್ಲಿ ಒಂದೇ ವಾಕ್ಯವನ್ನು ರೂಪಿಸಿ ಹೇಳುವುದಾದರೆ- “ಅರಿವನ್ನು ಮೂಡಿಸುವುದು ನುಡಿಯ ಕೆಲಸ, ಪುರುಳಿನದಲ್ಲಎಂದು ಒಕ್ಕಣಿಸಬಹುದು.

ಪರಿಸಂಖ್ಯೈಕೈವಾಲ್ಂ ಧ್ವನಿಕಂದಾರ್ಥನಿರ್ಣಯೇ।

ಗ್ರಂಥಋಣ

1. ಮೀಮಾಂಸಾ ನ್ಯಾಯ ಪ್ರಕಾಶ
2. ಮೀಮಾಂಸಾ ದರ್ಪಣ, ಶ್ರೀ ದೇವುಡು ನರಸಿಂಹ ಶಾಸ್ತ್ರಿಗಳು
3. ಧ್ವನ್ಯಾಲೋಕ
4. ಭಾರತೀಯ ಕಾವ್ಯಮೀಮಾಂಸೆ- ತೀ.ನಂ.ಶ್ರೀ
5. ತರ್ಕ ಸಂಗ್ರಹ
6. ಕವಿರಾಜಮಾರ್ಗ




{PUBLISHED IN CHINTHANA BAYALU - JANUARY - MARCH 2015} (ಚಿಂತನ ಬಯಲು (ಸಂಪುಟ 3 ಸಂಚಿಕೆ 3)- ಜನವರಿ- ಮಾರ್ಚ್ ಸಂಚಿಕೆಯಲ್ಲಿ ಪ್ರಕಟಗೊಂಡಿದೆ).




ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಪರಿಸಂಖ್ಯಾ ಪರಿಚಯ

ಪರಿಸಂಖ್ಯಾ ಪರಿಚಯ ವೇದದಲ್ಲಿರುವ ವಿಧಿವಾಕ್ಯಗಳ ಅರ್ಥವಿಶ್ಲೇಷಣೆಗಾಗಿ ಪೂರ್ವಮೀಮಾಂಸಶಾಸ್ತ್ರದಲ್ಲಿ ಅನೇಕಾನೇಕನ್ಯಾಯಗಳನ್ನು , ಕಟ್ಟಳೆಗಳನ್ನು ನಿಗದಿಪಡಿಸಿದ್ದಾರೆ ...