ಶನಿವಾರ, ಅಕ್ಟೋಬರ್ 7, 2017

ಕವಿರಾಜಮಾರ್ಗದ ದ್ವನಿಕಂದ ಕುರಿತು ಒಂದು ಜಿಜ್ಞಾಸೆ:

ಕವಿರಾಜಮಾರ್ಗದ ದ್ವನಿಕಂದ ಕುರಿತು ಒಂದು ಜಿಜ್ಞಾಸೆ:

ನಿನಾಸಮ್ ಮಾತುಕತೆ ೧೦೨ ಸಂಚಿಕೆಯಲ್ಲಿನ ಪ್ರೊ. ಎಂ. ಎ. ಹೆಗಡೆ ಅವರ “ಭಾರತೀಯ ದರ್ಶನಗಳು ಮತ್ತು ಭಾಷೆ“ ಎಂಬ ಬರಹವನ್ನು ಓದುತಿದ್ದಂತೆ ಕವಿರಾಜಮಾರ್ಗದ ಧ್ವನಿಕಂದ ನೆನೆಪಾಯಿತು. ದ್ವನಿಕಂದದಲ್ಲಿ ಭಾಷೆಯ ಚರ್ಚೆಇಲ್ಲ.  ಆದರೆ ಭಾಷೆಗೆ ಸಂಬಧಿಸಿದಂತೆ ಶ್ರೀ  ಹೆಗಡೆ ಅವರು ಹೇಳ ಹೊರಟ ಕೆಲವು ಉಪಕರಣಗಳು, ಸಲಕರಣೆಗಳು, ಹತ್ಯಾರಗಳು ದ್ವನಿಕಂದದಲ್ಲಿ ಅಡಗಿವೆ.  ಸಂಸ್ಕೃತದ ಈ ಹತ್ಯಾರಗಳು ಕವಿರಾಜಮಾರ್ಗದ ಕನ್ನಡ ಭಾಷೆಗೂ ಅನ್ವಯಿಸಬಹುದು.ಪಾಂಡವರು ಅಜ್ಞಾತವಾಸಕ್ಕೆ ಹೊರಟಾಗ ತಮ್ಮ ಆಯುಧಗಳನ್ನು ಮೂಟೆಕಟ್ಟಿ ಮರದ ಮೇಲಿಟ್ಟು ಹೋಗಿದ್ದರಂತೆ. ನಾಡಿನ ಮಾನ್ಯ ವಿದ್ವಾಂಸರು ಕೆಲವರು ದ್ವನಿಕಂದದಲ್ಲಿ ಆಕಸ್ಮಿಕವಾಗಿ ತಾವು ಕಂಡುಕೊಂಡ ಅರ್ಥವನ್ನು ಮುನ್ನೆಲೆಗೆ ತಂದು ನಿಲ್ಲಿಸುವ ಭರಭರಾಟೆಯಲ್ಲಿ ಆ ಕಂದದಲ್ಲಿರುವ ಶಾಸ್ತ್ರೀಯ ಅಂಶಗಳನ್ನು,  ಹತ್ಯಾರಗಳನ್ನು ಗೂಡಾರದಲ್ಲಿ(1) ಮುಚ್ಚಿಟ್ಟು ಶ್ರೀವಿಜಯನ ವಿವಕ್ಷಿತಾರ್ಥಕ್ಕೆ ತಾವೇ ಹೊಲಿದು ಸಿದ್ದಪಡಿಸಿದ ಬಣ್ಣಬಣ್ಣದ ದಿರಿಸು ತೊಡಿಸಿ ತಲೆಮರೆಯಿಸಿ ರೂಪಾಂತರಗೊಳಿಸಿ- ಕಂಕ ವಲಲರ ಹಾಗೆ - ‘ಧ್ವನಿಯೆಂಬ ಒಂದು ಅಲಂಕಾರ’ ಎಂಬ ಹೆಸರಿಟ್ಟು (ಇಸ್ವಿ ೧೯೩೦-೨೦೧೬) ಎಂಬತ್ತೇಳು ವರ್ಷಗಳ ಲಾಗಾಯ್ತು ವಿವಕ್ಷಿತಾರ್ಥವನ್ನು ಆಜ್ಞಾತವಾಸಕ್ಕೆ ತಳ್ಳಿದ್ದಾರೆ. ಈ ಕುರಿತು ಮಾತುಕತೆಯ ಓದುಗರೊಡನೆ ಒಂದಿಷ್ಟು ಮಾತುಕತೆ ಶುರುಹಚ್ಚಿಕೊಳೋಣಾಂತ ಈ ಒಂದ್ಸಣ್ ವಿಶ್ಯಕ್ಕೆ ಕೈಹಾಕಿದ್ದಾಗಿದೆ.

ಪರಿಸಂಖ್ಯಾವಿಧಿ ಅನ್ವಯಸಾಮಗ್ರಿಯ ಬಳಕೆ ಲಕ್ಷಣಾ ಮುಂತಾದ ಪರಿಭಾಷೆಗಳು ಭಾಷೆಗೆ ಸಂಬಂಧಿಸಿದ ಹತ್ಯಾರಗಳು ಶಾಸ್ತ್ರಗಳಲ್ಲಿ ಬಳಕೆಯಲ್ಲಿವೆ.  ಇವುಗಳ ಪೈಕಿ ಶಬ್ದವಿಶೇಷಗಳ ಸನ್ನಿವೇಶರೊಪದ ಅರ್ಥವಿಶೇಷಸ್ಮಾರಕವೆನಿಸುವ ಸಾಹಚರ್ಯನಿಯಮ, ಪರಿಸಂಖ್ಯಾ, ಅನ್ವಯಸಾಮಗ್ರಿ, ಲಕ್ಷಣಾ ಹಾಗೂ ನೆನೆದಾತುಪ್ರಯೋಗ ಇವಿಷ್ಟು ಶಾಸ್ಥ್ರೀಯಾಂಶಗಳು ದ್ವನಿಕಂದದಲ್ಲಿವೆ.  ಇವುಗಳನ್ನು ಇಲ್ಲಿ ಅನ್ವಯಸಿದ್ದಾದರೆ ಆಗ ಕಂದದ ನಕಲಿ ಅರ್ಥ ಧ್ವನ್ಯಲಂಕಾರವೆಂಬುದು ಬಣ್ಣ ಬದಲಾಯಿಸಿ ಅವತಾರ ಮುಗಿಸಬೇಕಾಗುತ್ತದೆ.

ಮಾರ್ಗಕಾರನು ಹೇಳಿದ್ದು ಮುವ್ವತ್ತನಾಲ್ಕು ಅರ್ಥಾಲಂಕಾರಗಳನ್ನು ಮಾತ್ರ.  ಭಾವಿಕ ದ್ವನಿಗಳು ಅವನ ಪ್ರಕಾರ ಅರ್ಥಾಲಂಕಾರಗಳಲ್ಲ. ‘ದ್ವನಿಯೆಂಬುದಳಂಕಾರಂ’  ಎಂಬೀ ಹೆಸರು ಹಾಗೂ ‘ಕಮಲದೊಳನಿಮಿಷಯುಗಂ’ ಎಂಬೀ ಲಕ್ಷ್ಯದ ಉದಾಹರಣೆಯನ್ನು ನೋಡಿ, ಹೋ! ಇದೂ  ಒಂದು ಅರ್ಥಾಲಂಕಾರ’ ಎಂಬುದಾಗಿ ಕೆಲವರು ಭ್ರಮಿಸಿಬಿಟ್ಟರು.  ಬಾಲ ಕೊಂಬು ಇವೆ ಅಂದಮೇಲೆ ಅದು ಹಸುವು ಆಗಿರಬೇಕು. ಆದರೆ ಗಂಗೆದೊಗಲು ಮಾತ್ರ ಇಲ್ಲ! ಇಲ್ಲೂ ಹಾಗೆ ಆಗಿದೆ.  ಅರ್ಥಾಲಂಕಾರ ಅಂದಾಗ ಅದಕ್ಕೊಂದು ಲಕ್ಷಣ ಹೇಳಿರಬೆಕು. ‘ದ್ವನಿಯಿಸುಗುಂ ಶಬ್ದದಿಂದಮರ್ಥದೆ ದೊಷ್ಯಂ’- ಈ ವಾಕ್ಯಗಳು ಅರ್ಥಾಲಂಕಾರವೊಂದರ ಲಕ್ಷಣ ಎನಿಸುತ್ತವೆಯೆ? ಮಾರ್ಗಕಾರನಂತಹ ಲಾಕ್ಷಣಿಕನು ಅರ್ಥಾಲಂಕಾರವೊಂದಕ್ಕೆ ಈ ಬಗೆಯ ಎಡಬಿಡಂಗಿ ಲಕ್ಷಣವನ್ನು ಹೊಸೆದು ನಿಲ್ಲಿಸಿದ್ದು ಸಂಭವವೆ?  ಎಲ್ಲ ಅಲಂಕಾರಗಳೂ ಶಬ್ದದಿಂದಲೇ ತೋರುತ್ತವೆ.  ಅರ್ಥವು ಅಸಂದ್ದವಾಗಿರಬೇಕು ಎಂಬುದಾಗಿ ಆಲಂಕಾರಿಕರು ಯಾರಾದರೂ ಹೇಳುತ್ತಾರೆಯೇ?  ‘ಕಮಲದೊಳನಿಮಿಷಯುಗಂ’ ಎಂಬಲ್ಲಿ ಕಾವ್ಯಮಿಮಾಂಸೆಯ ಪ್ರಕಾರ ವಾಚ್ಯಾರ್ಥವು ಅಸಂಗತ, ದೊಷ್ಯ ಎಂದು ಹೇಳಬಹುದೇ? ಧ್ವನ್ಯಲಂಕಾರವು ಮಾರ್ಗಕಾರನು ಹೇಳಿದ್ದಲ್ಲ.  ಧ್ವನಿಕಂದದಲ್ಲಿರುವ ಭಾಷೆಯ ಹತ್ಯಾರಗಳನ್ನು ಗಮನಿಸದೆಹೋದ ಕಾರಣ ಅಲ್ಲಿಲ್ಲದ ಅರ್ಥವನ್ನು ಕಲ್ಪಿಸಿಕೊಂಡು ಕೆಲವರು ಫಸಿಹೋದರು. ‘ಅತ್ಯ್ಂತಾಸತ್ಯಪಿಹ್ಯರ್ಥೇ ಜ್ಞಾನಂ ಶಬ್ದಃ ಕರೋತಿ ವೈ’ (2).  ಅಕಸ್ಮಾತ್ ಹೀಗಾಗುವುದುಂಟು.  ನಾವು ಮನುಷ್ಯರು ತಾನೆ!

ನ ಸೋsಸ್ತಿ ಪ್ರತ್ಯಯೋ ಲೋಕೆ ಯಃ ಶಬ್ದಾನುಗಮಾದೃತೇ
ಅನುವಿದ್ಧಮಿವ ಜ್ಞಾನಂ ಸರ್ವಂ ಶಬ್ದೇನ ಭಾಸತೇ (3)

ಶಬ್ದ ಸಂಸ್ಪರ್ಶವಿಲ್ಲದ ಯಾವುದೇ ಒಂದು ಜ್ಞಾನವೂ ಲೋಕದಲ್ಲಿಲ್ಲ,  ಸಮಸ್ತ ಜ್ಞಾನವೂ ಶಬ್ದದೊಂದಿಗೆ ಕೂಡಿಹೊಗಿದೆಯೋ ಯೆಂಬಂತೆಯೇ ಭಾಸವಾಗುತ್ತದೆ.

ಶಬ್ದ ಅರ್ಥ ಜ್ಞಾನ ಈ ಮೂರೂ ಪದಾರ್ಥಗಳು ಇಡಿಯಾಗಿ ಮೂರೂ ಒಟ್ಟಾಗಿ ನಮ್ಮ ಅನುಭವಕ್ಕೆ ಬರುತ್ತವೆಯೇ ಹೊರತು ಬಿಡಿಬಿಡಿಯಾಗಿ ಅನುಭವಕ್ಕೆ ಬರುವುದಿಲ್ಲ. (4)

ಯತ್ರಾರ್ಥ ಶಬ್ದೋ ವಾ ತಮರ್ಥಮುಪಸರ್ಜನೀಕೃತಸ್ವಾರ್ಥೌ
ವ್ಯಂಕ್ತಃ ಕಾವ್ಯವಿಶೇಷಃ ಸ ದ್ವನಿರಿತಿ ಸೂರಿಭಿಃ ಕಥಿತಃ (5)
ಯತ್ರ ಉಪಸರ್ಜನೀಕೃತಸ್ವಃ ಅರ್ಥಃ ತಮರ್ಥಂ ವ್ಯನಕ್ತಿ
ಸ ಕಾವ್ಯವಿಶೇಷಃ ದ್ವನಿರಿತಿ ಸೂರಿಬಿಃ ಕಥಿತಃ

ಎಲ್ಲಿ ಅರ್ಥವಾಗಲಿ, ಅಥವಾ ಶಬ್ಧವಾಗಲಿ (ಅನುಕ್ರಮವಾಗಿ) ತನ್ನನ್ನು ಅಥವ ತನ್ನ ಅರ್ಥವನ್ನು ಅಪ್ರಧಾನವಾಗಿರಿಸಿಕೊಂಡು ಆ ವ್ಯಂಗ್ಯಾರ್ಥವನ್ನು ಸೂಚಿಸುವುದೋ ಆ ಕಾವ್ಯವಿಶೇಷವನ್ನು ಪಂಡಿತರು ‘ಧ್ವನಿ’ ಎಂದು ಕರೆದಿದ್ದಾರೆ. (6)

ಧ್ವನಿಕಂದ-
ಧ್ವನಿಯೆಂಬುದಳಂಕಾರಂ
ಧ್ವನಿಯಿಸುಗುಂ ಶಬ್ದದಿಂದಮರ್ಥದೆ ದೂಷ್ಯಂ
ನೆನೆವುದಿದನಿಂತು ಕಮಲದೊಳ್
ಅನಿಮಿಷಯುಗಮೊಪ್ಪಿ ತೋರ್ಪುದಿಂತಿದು ಚೋದ್ಯಂ (7)

ಸಂಸ್ಕೃತದ ‘ಯತ್ರಾರ್ಥಃ ಶಬ್ದೋ ವಾ …’ ಎಂಬೀ ಧ್ವನಿಕಾವ್ಯಲಕ್ಷಣಕಾರಿಕೆಗೆ ಧ್ವನಿಕಂದವು ಮಾರ್ಗಕಾರನ ನೇರ ಮುಖಾಮುಖಿ ಪ್ರತಿಕ್ರಿಯೆಯೆಂಬುದನ್ನೂ ಈ ಎರಡೂ ಕಾರಿಕೆಗಳಲ್ಲಿರುವ ಶಬ್ದ ಅರ್ಥ ಧ್ವನಿ ಎಂಬೀ ಮೂರು ಶಬ್ದವಿಶೇಷಗಳ ಸಂನಿವೇಶರೂಪದ ಸಾಹಚರ್ಯವು ಈ ಎರಡರಲ್ಲೂ ಇರುವುದನ್ನು ಕೂಡ ಗಮನಿಸಬೇಕು.  ಈ ಮೇಲಿನ ಧ್ವನಿಕಾವ್ಯಲಕ್ಷಣಕಾರಿಕೆಯನ್ನು ಕಂಡು-ಕೇಳಿ-ತಿಳಿದಿದ್ದರಿಂದಲೇ ಮಾರ್ಗಕಾರನು ಧ್ವನಿಕಂದವನ್ನು ರಚಿಸಲು ಸಾಧ್ಯವಾಯಿತು.  ಆ ಕಾರಿಕೆಯು ಅವನ ಕಿವಿಗೂ ಬೀಳದಿದ್ದರೆ ಧ್ವನಿಕಂದವನ್ನು ರಚಿಸಲು ಸಾಧ್ಯವಾಗುತ್ತಿರಲಿಲ್ಲ. ‘ಅರ್ಥಂ ಬುಧ್ವಾ ಶಬ್ದರಚನಾ’ ಎಂದು ಹೇಳುತ್ತಾರೆ. ಶ್ರೀವಿಜಯನು ಧ್ವನಿಕಾವ್ಯಲಕ್ಷಣಕಾರಿಕೆಯನ್ನು ಕಂಡೋ ಕೇಳಿಯೋ ತಿಳಿಯದಿದ್ದರೆ ಅವನು ‘ಧ್ವನಿಯಿಸುಗುಂ ಶಬ್ದದಿಂದಂ’ ಎಂದು ಪರಿಸಂಖ್ಯೆಯನ್ನು ಪ್ರಯೋಗಿಸುವುದಾದರೂ ಹೇಗೆ? ‘ಅರ್ಥಃ ತಮರ್ಥಂ ವ್ಯನಕ್ತಿ’ ಎಂಬೀ ಮಾತು ಮೊದಲ ಬಾರಿಗೆ ಕಾಣಿಸಿಕೊಂಡದ್ದು ಈ ಮೇಲಿನ ಕಾರಿಕೆಯಲ್ಲೇ ತಾನೆ! ಅರ್ಥವೂ ಅರ್ಥಾಂತರವನ್ನು ಸೂಚಿಸುತ್ತದೆ ಎಂಬ ಅರ್ಥವನ್ನು ತಿಳಿಸುವ ಮಾರ್ಗಕಾರನು  ನೋಡಿರಬಹುದಾದ ಇನ್ನೊಂದು ವಾಕ್ಯವಿದ್ದರೆ ಅದನ್ನಿಲ್ಲಿ ಉದಾಹರಿಸಬೇಕು.

ಪರಿಸಂಖ್ಯೆಯ ಸ್ಥಳದಲ್ಲಿ ಉಭಯಪ್ರಾಪ್ತಿ ಅನ್ಯತರನಿವೃತ್ತಿ ಎಂಬೀ ಎರಡು ಅರ್ಥಗಳ ಸಂನಿವೇಶ ಸಂದರ್ಭಗಳಿರಬೇಕು.  ದ್ವನಿಪ್ರಸ್ಥಾನದ ಉಗಮದವರೆಗೂ ಕೂಡ (ಸುಮಾರು ಕ್ರಿ.ಶ. ೮೫೦ರಿಂದ ೮೮೦ ಆಸುಪಾಸು) ಭಾರತೀಯ ವಿದ್ವತ್ ಕ್ಷೇತ್ರದಲ್ಲಿ ‘ನ ಸೋsಸ್ತಿ ಪ್ರತ್ಯಯೋ ಲೋಕೇ…’ ಎಂಬಂತಹ ಶಾಸ್ತ್ರವಚನ ಹಾಗೂ ಲೋಕರೂಡಿಯ ಮೇರೆಗೆ ಶಬ್ದವು ಮಾತ್ರವೇ ಜ್ಞಾನಸಾಧನ ಜ್ಞಾನಜನಕ ಎಂಬಂತ ನಂಬಿಕೆಯು ಪ್ರಚಲಿತವಾಗಿತ್ತು.  ಧ್ವನಿಪ್ರಸ್ಥಾನವು ಇದಂಪ್ರಥಮವಾಗಿ ಅರ್ಥವೂ ಜ್ಞಾನಜನಕ ಜ್ಞಾನಸಾಧನ, ವ್ಯಂಜನಾವೃತ್ತಿಯ ಬಲದಿಂದ ಅರ್ಥವೂ ಕೂಡ ಅರ್ಥಾಂತರಬೋಧಕ ಎಂಬೀ ಹೊಸ ವಿಚಾರವೊಂದನ್ನು ಭಾರತೀಯ ಕಾವ್ಯಮೀಮಾಂಸಾ ವಿದ್ವತ್ ಕ್ಷೇತ್ರದಲ್ಲಿ ಹರಿಬಿಟ್ಟಿತು.  ಇದರಿಂದಾಗಿ ಕಾವ್ಯಾರ್ಥಪ್ರತೀತಿಯೆಂಬ ಒಂದು ಕ್ರಿಯೆಯಲ್ಲಿ ಶಬ್ದ ಅರ್ಥ ಎಂಬೀ ಎರಡು ಸಾಧನಗಳು ಅವಿಶೇಷವಾಗಿ ಯುಗಪತ್ ಎಕದ್ಂ ಬಂದೊದಗಿದವು.  ಇದು ಇಲ್ಲಿ ಉಭಯಪ್ರಾಪ್ತಿ ಎನಿಸುತ್ತದೆ.  ಈ ಬಗೆಯ ಉಭಯಪ್ರಾಪ್ತಿಯ ಸಂದರ್ಭದಲ್ಲಿ ಒಂದು ಸಾಧನವನ್ನು ಸ್ವೀಕರಿಸಿ- ಅಂದರೆ ಉಳಿಸಿಕೊಂಡು, ಇನ್ನೊಂದನ್ನು ತಿರಸ್ಕರಿಸುವಿಕೆ ಅಥವಾ ನಿಷೇಧಿಸುವಿಕೆ.  ನಿಷೇಧಿಸುವಿಕೆಯೇ ಇಲ್ಲಿ ಅನ್ಯತರನಿವೃತ್ತಿಯೆನಿಸುತ್ತದೆ. ಈ ತರಹದ ಸಂನಿವೇಶದಲ್ಲಿ ಶಾಸ್ತ್ರಕಾರರು ಪರಿಸಂಖ್ಯೆಯನ್ನು ಪ್ರಯೋಗಿಸುತ್ತಾರಂತೆ.  ಇದೊಂದು ತರಹದ ವಚೋಭಂಗಿ, ಪ್ರಯೋಗವೈಚಿತ್ರ್ಯ.  
‘ಧ್ವನಿಯಿಸುಗುಂ ಶಬ್ದದಿಂದಂ’ ಎಂಬಲ್ಲಿ  ‘ನ ಸೋsಸ್ತಿ ಪ್ರತ್ಯಯೋ ಲೋಕೇ …’ ಎಂಬೀ ಬಗೆಯ ಶಾಸ್ತ್ರಸಂಸ್ಕಾರದ ಮನಸ್ಸಿನ ಹಿನ್ನೆಲೆಯನ್ನು ಗಮನಿಸಬಹುದು.  ಮಾರ್ಗಕಾರನ ಇದೇ ಸಂಸ್ಕಾರವನ್ನು ಮುಂದಿನ ಮುಕುಲಭಟ್ಟ ಜಯಂತಭಟ್ಟರ ವ್ಯಂಜನಾವಿರೋಧಸಂದರ್ಭದ ಮಾತುಗಳಲ್ಲೂ ಗುರುತಿಸಬಹುದು. ಧ್ವನಿವಿರೋಧಿಗಳ ಮಾತುಗಳನ್ನೂ ‘ಧ್ವನಿಯಿಸುಗುಂ ಶಬ್ದದಿಂದಮರ್ಥದೆ ದೂಷ್ಯಂ’ ಎಂಬುದನ್ನೂ ಒಟ್ಟಿಗೆ ಇಟ್ಟುಕೊಂಡು ಪರಿಶೀಲಿಸಿದ್ದಾದರೆ ಧ್ವನಿಕಂದದ ಐನಾತಿ ಮಜಕೂರ್ ಎನೆಂಬುದು ಮನದಟ್ಟಾದೀತು.

‘ಅರ್ಥದೆ ದೂಷ್ಯಂ = ಅರ್ಥದೆಯುಂ ಧ್ವನಿಯಿಸುಗುಮೆಂಬುದು ದೂಷ್ಯಂ’ ಎಂಬೀ ಮಾತು ಧ್ವನಿಕಾವ್ಯಲಕ್ಷಣ ಕಾರಿಕೆಯಲ್ಲಿರುವ ‘ಅರ್ಥಃ ತಮರ್ಥಂ ವ್ಯನಕ್ತಿ’ ಎಂಬುದರ ನಿರಾಕರಣೆ.  ಭಾರತೀಯ ಕಾವ್ಯಮೀಮಾಂಸಾ ಕ್ಷೇತ್ರದಲ್ಲಿ ಧ್ವನಿಪ್ರಸ್ಥಾನವು ಗಟ್ಟಿಯಾಗಿ ನೆಲೆಗೊಳ್ಳುವವರೆಗೂ ಕೂಡ ವ್ಯಂಜನೆಯನ್ನು ಕುರಿತು ಈ ಬಗೆಯ ಅಸಹಿಷ್ಣುತೆಯು ಅಲ್ಲಿ ಇಲ್ಲಿ ಕೇಳಿ ಬರುತ್ತಿದ್ದುದು ಸಹಜ.

ಶಬ್ದ, ವಾಕ್ಯಗಳು ಹವಣಾಗಿ ಒಗ್ಗಿ ಕೂಡಿದಾಗ ಭಾಷೆಗೊಂದು ಹದವಾದ ಪಾಕ ಮೈಗೂಡುತ್ತದೆ. ಅದು ಪಳಗಿದ ಭಾಷೆಯೆನಿಸುತ್ತದೆ.  ಭಾಷೆಯ ಪರಿವಾರಗಳು ಉಪಕರಣಗಳು ಸಲಕರಣೆ ಹತ್ಯಾರಗಳು ಸಂನಿವೇಶ ಸಂದರ್ಭಗಳಿಗೆ ತಕ್ಕಂತೆ ಔಚಿತ್ಯಕ್ಕನುಗುಣವಾಗಿ ಒದಗಿಬಂದಾಗ ಭಾಷೆಯು ಶಾಸ್ತ್ರ ಕಾವ್ಯ ವ್ಯವಹಾರ ಎಲ್ಲೆಡೆಗೂ ‘ಸಮರ್ಥ’ ಎನಿಸುತ್ತದೆ.  ಮಾರ್ಗಕಾರನದು ಈ ಮೂರಕ್ಕು ಲಾಯಕ್ಕಾದ ಭಾಷೆ.  ಅಂತೆಯೇ ಅವನು ಧ್ವನಿಕಂದದಲ್ಲಿ ತನ್ನ ನುಡಿಜಾಣ್ಮೆಯನ್ನು ಮೆರೆದು ಕೊಡದಲ್ಲಿ ಕಡಲನ್ನೆ ತುಂಬಿಟ್ಟಂತೆ ಆ ಒಂದು ಪುಟ್ಟ ಕಂದದಲ್ಲಿ ನಾಲ್ಕೈದು ಶಾಸ್ತ್ರೀಯಾಂಶಗಳನ್ನು ಜೋಡಿಸಿಟ್ಟಿದ್ದಾನೆ.

‘ಪ್ರಕೃತಿಪ್ರತ್ಯಯೌ  ಸಹಾರ್ಥಂ ಬ್ರೂತಃ ತಯೋಸ್ತು ಪ್ರತ್ಯಯಃ ಪ್ರಾಧಾನ್ಯೇನ. ಗುಣೇ ತ್ವನ್ಯಾಯಕಲ್ಪನಾ.’ -- ಪ್ರಕೃತಿ ಪ್ರತ್ಯಯಗಳೆರೆಡೂ ಒಟ್ಟಾಗಿ ಅರ್ಥವನ್ನು ತಿಳಿಸುತ್ತವೆಯಾದರೂ ಪ್ರತ್ಯಯಕ್ಕೇ ಹೆಚ್ಚುಗಾರಿಕೆ.  ಪ್ರಕೃತ್ಯರ್ಥದಲ್ಲಿ ಲಕ್ಷಣಾವೃತ್ತಿಯಿಂದ ಬೇರೆ ಅರ್ಥ ಹೇಳಬಹುದೇ ಹೊರತು ಪ್ರತ್ಯಯಾರ್ಥವನ್ನು- ಗಮಕ, ಪ್ರಯೋಜನ ಏನೂ ಇಲ್ಲದಿದ್ದಾಗ- ಬದಲಾಯಿಸಬಾರದು ಎಂಬುದಾಗಿ ಹಿಂದಿನವರು ಹೇಳಿದ್ದಾರೆ.  ‘ಗಂಗಾಯಾಂ ಘೋಷಃ’ ಎಂಬಲ್ಲಿ ಲಕ್ಷಣಯಾ ‘ಗಂಗಾ’ ಪ್ರಕೃತಿಗೆ ಗಂಗಾತೀರ ಎಂದು ಅರ್ಥ ಹೇಳುತ್ತಾರೆಯೇ ಹೊರತು ಸಪ್ತಮಿಯ ಅಧಿಕರಣಾರ್ಥವನ್ನು ಬದಲಾಯಿಸಿಲ್ಲ.  ಆದರೆ ಇಲ್ಲಿ ನೋಡಿ- ‘ಅರ್ಥದೆ’ ಎಂಬೀ ತೃತೀಯಾಕ್ಕೆ ಧ್ವನ್ಯಲಂಕಾರವಾದಿಗಳು 'ವಾಚ್ಯಾರ್ಥ’ ಎಂಬುದಾಗಿ ಪ್ರಥಮಾಂತದ ಅರ್ಥವನ್ನು ಹೇಳುತ್ತಾರೆ! ‘ಕಮಲದೊಳನಿಮಿಷಯುಗಂ’ ಎಂಬಲ್ಲಿ ವಾಚ್ಯಾರ್ಥವು ಅಸಂಗತ; ಅತ ಏವ ದೂಷ್ಯ ಎಂಬುದಿಲ್ಲಿ ಆಧುನಿಕಕಾವ್ಯಮೀಮಾಂಸಕರ ಕೆಲವರ ವ್ಯಾಖ್ಯಾನ. ‘ಧ್ವನಿ’ ಎಂಬ ಒಂದು ಅರ್ಥಾಲಂಕಾರವನ್ನು ನಜರ್ ಚೂಕ್ ನಿಂದ ಕಂಡುಕೊಂಡದ್ದೇ ಮೊದಲನೆಯ ಎಡವಟ್ಟು.  ಆ ಎಡವಟ್ಟನ್ನು ಸಮರ್ಥಿಸಲು ಎಡವಟ್ಟಿನ ಸರಪಣಿಯನ್ನು ಮಾರುದ್ದ ನೇಯಬೇಕಾಯಿತು.  ವಾಚ್ಯಾರ್ಥಬಾಧೆಯು ಕಂಡುಬಂದಲ್ಲಿ ಲಕ್ಷಣೆಯನ್ನಾಶ್ರಯಿಸಿ ಸಂಗತವಾಗುವ ಕಾವ್ಯಾರ್ಥವನ್ನು ಕಂಡುಕೊಳ್ಳಬೇಕೆಂಬುದನ್ನು ಕಾವ್ಯಮೀಮಾಂಸೆಯೇ ಹೇಳಿದೆ.  ವಾಚ್ಯಾರ್ಥಬಾಧೆಯು ಕಾವ್ಯದೋಷವಲ್ಲ, ಬದಲಾಗಿ ಕಾವ್ಯಭೂಷಣ.  ಕವಿಸಮಯಾನುಸಾರವಾಗಿ ಪರಂಪರೆಯಿಂದಲೂ ಅನುಸರಿಸಿಕೊಂಡುಬಂದ, ನಿರ್ದುಷ್ಟವೆಂದು ಗೃಹೀತವಾದ ಎಲ್ಲ ಕಾವ್ಯಮಾರ್ಗಗಳೂ ಗ್ರಾಹ್ಯವೇ ಸರಿಯೆಂಬುದು ಕಾವ್ಯಮೀಮಾಂಸಕರ ಅಭಿಪ್ರಾಯ.  ಕಮಲದೊಳನಿಮಿಷ ಯುಗಂ- ಎಂಬುದೂ ಕೂಡ ಸತ್ ಕಾವ್ಯಪರಂಪರೆಗೇ ಒಳಪಡುತ್ತದೆ.

‘ಧ್ವನಿಯೆಂಬುದಳಂಕಾರಂ’ ಎಂಬೀ ಮಾತು ಅರ್ಥಾಲಂಕಾರವೊಂದರ ಹೆಸರೇ ಹೊರತು ‘ಅಂತರ್ಭಾವವಾದ’ವನ್ನು ಹೇಳಲು ‘ಸಮರ್ಥ’ವಾಗಿಲ್ಲ ಎಂಬುದು ನಿಜ. ‘ಧ್ವನಿಯಿಸುಗುಂ ಶಬ್ದದಿಂದಮರ್ಥದೆ ದೂಷ್ಯಂ’ ಎಂಬೀ ಮಾತು ಅರ್ಥಾಲಂಕಾರವೊಂದರ ಲಕ್ಷಣವೆನಿಸಲು ‘ಸಮರ್ಥ’ವಾಗಿಲ್ಲ ಎಂಬುದೂ ಕೂಡ ಅಷ್ಟೇ ನಿಜ. ಹಾಗಾದರೆ ಧ್ವನಿಯೆಂಬುದು ಒಂದು ಅಲಂಕಾರವಂತೂ ಆಗಲು ಸಾಧ್ಯವಿಲ್ಲ.  ಮತ್ತೇನಾಗಬೇಕು? ಅಲಂಕಾರಗಳು ಎಂದೇ ಆಗಬೇಕು.  ಆಗೇನಾಯಿತು? ಅಂತರ್ಭಾವವಾದ ಎಂದೇ ಸಿದ್ಧವಾಯಿತು.

ಧ್ವನಿಯೆಂಬುದು ಒಂದು ಅರ್ಥಾಲಂಕಾರ ಎಂಬುದಾಗಿ ಮತ್ತೆಲ್ಲೂ ಕೇಳಿಬಂದಿಲ್ಲ.  ಬದಲಾಗಿ ಧ್ವನ್ಯಲಂಕಾರವೆಂದರೆ ಶಬ್ದಾಲಂಕಾರ ಎಂಬುದು ಕೇಳಿಬಂದಿದೆ.

ಚಿತ್ರಂ ವಕ್ರೋಕ್ತ್ಯನುಪ್ರಾಸೌ ಯಮಕಂ ಧ್ವನ್ಯಲಂಕ್ರಿಯಾ।
ಅರ್ಥಾಲಂಕೃತಯೋ ಜಾತಿರುಪಮಾ ರೂಪಕಂ ತಥಾ.॥
                                                                  (ವಾಗ್ಭಟಾಲಂಕಾರ -೪-೨)

‘ಶಬ್ದ’ ಶಬ್ದಕ್ಕೆ ಬದಲು ‘ಧ್ವನಿ’ ಶಬ್ದವು ಹಿಂದೆ ಬಳಕೆಯಲ್ಲಿತ್ತು ಎಂಬುದಕ್ಕೆ ಭಾಮಹನಲ್ಲಿ ಉದಾಹರಣೆಯಿದೆ. ‘ಧ್ವನಿಯೆನಿಸಿದಳಂಕಾರಧ್ವನಿ’ (8) ಎಂಬಲ್ಲಿ ಪಂಪನು ಶಬ್ದಾಲಂಕಾರವನ್ನೆ ಹೇಳುತ್ತಿದ್ದಾನೆಂಬುದನ್ನು ಗಮನಿಸಬಹುದು.

ಒಟ್ಟಿನಲ್ಲಿ ಧ್ವನಿಕಂದದ ಸಂದರ್ಭದಲ್ಲಿ ಒಟ್ಟಾದ ಪುರುಳು ಇವಿಷ್ಟು: ಧ್ವನಿಯೆಂಬುದು ಅಲಂಕಾರಗಳು, ಅರಿವನ್ನು ಮೂಡಿಸುವುದು ನುಡಿಯ ಕೆಲಸ ಪುರುಳಿನದಲ್ಲ.  ಪುರುಳು ಕೂಡ ಇನ್ನೊಂದು ಪುರುಳನ್ನು ಹೊಳೆಯಿಸುತ್ತದೆ ಎಂಬ ಮಾತು ಸರಿಯಲ್ಲ.  ಇದನ್ನು- ಧ್ವನಿಯೆಂಬುದು ಅಲಂಕಾರಗಳು ಎಂಬುದನ್ನು- ಹೀಗೆ ನೆನಪು ಮಾಡಿಕೊಳ್ಳಿ. ಅಂದರೆ, ಅಲ್ಲಲ್ಲಿರುವ ಲಕ್ಷ್ಯಗಳನ್ನು ಉದಾಹರಣೆಗಳನ್ನು ನೋಡಿ ಈ ಹಿಂದೆ ನಿರೂಪಿಸಲ್ಪಟ್ಟ ಅತಿಶಯೋಕ್ತಿಯೇ ಮೊದಲಾದ ಅಲಂಕಾರಗಳ ಪೈಕಿ ಪ್ರಕೃತಕ್ಕೆ ಯಾವ ಅಲಂಕಾರವು ಹೊಂದಿಕೆಯಾದೀತೆಂಬುದನ್ನು ಕಂಡುಕೊಳ್ಳಿ ಎಂದರ್ಥ.  ‘ಕಮಲದೊಳನಿಮಿಷಯುಗಂ’ ಎಂಬಲ್ಲಿ ಅತಿಶಯೋಕ್ತಿಯಿದೆ.  ಲೋಕಮರ್ಯಾದೆಯನ್ನು, ನಿಯತಿಕೃತನಿಯಮವನ್ನು ಮೀರಿ ವಾಚ್ಯಾರ್ಥವು ಅಸಂಗತ, ಬಾಧಿತ ಎಂಬಂತೆ ಹೇಳುವುದೇ ಅತಿಶಯ. ‘ಲೋಕಸೀಮಾತಿವರ್ತನಃ ವಿಶೇಷಸ್ಯ ವಿವಕ್ಷಾ’. ಅದು ಕವಿಸಮಯ. ಅಭೇದಾಧ್ಯವಸಾಯ, ಅಧ್ಯಾರೋಪ.  ‘ಬಾಧಕಾಲೀನ ಇಚ್ಚಾಜನ್ಯಜ್ಞಾನಂ ಆರೋಪಃ’ ಮುಂತಾಗಿ ಕಾವ್ಯಮೀಮಾಂಸೆಯು ಹೇಳುತ್ತದೆ.   ‘ಕಮಲದೊಳನಿಮಿಷಯುಗಂ’ ಎಂಬುದು ಮಾತ್ರ ವಾಚ್ಯಾರ್ಥ ಅಸಂಗತ ಬಾಧಿತ, ದೂಷ್ಯ ಎನಿಸಿದ್ದು ಹೇಗೆ?

ಧ್ವನಿಕಂದದಲ್ಲಿ ಧ್ವನ್ಯಲಂಕಾರ ತಲೆದೋರಿದ್ದು ಇಸ್ವಿ 1930ರಲ್ಲಿ.  ಹಾಗಾಗಿ ಪಂಪ ರನ್ನರಿಗೆ ಈ ಧ್ವನ್ಯಲಂಕಾರದ ಚಮತ್ಕಾರವನ್ನು ಸವಿದು ಸುಖಿಸುವ ಯೋಗ ಒದಗಿಬರಲಿಲ್ಲ.  ಪಂಪನು ಹೇಳಿದ್ದು ಶಬ್ದಾಲಂಕಾರದ ಬಗೆಗೆ. ರನ್ನನು ಭರತನ ಕಾವ್ಯಭೂಷಣಗಳನ್ನು ‘… ಅಲಂಕ್ರಿಯಾರಚನೆ ಮೂವತ್ತಾರು ನೇರ್ಪಟ್ಟವು’ ಎಂದು ಹೇಳುತ್ತಾನೆ.

ಫಲಾನಾವಾಕ್ಯದಲ್ಲಿ ಪರಿಸಂಖ್ಯೆಯಿದೆ ಎಂಬುದು ಸಟ್ಟನೆ ನಮ್ಮ ತಲೆಗೆ ಹತ್ತುವುದೇ ಇಲ್ಲ.  ಪರಿಸಂಖ್ಯೆಯ ಗತ್ತೇ ಹಾಗಿದೆ.  ಪರಿಸಂಖ್ಯಾಸ್ಥಳದಲ್ಲಿ ನಿಷೇಧವೇ ವಾಕ್ಯದ ವಿವಕ್ಷಿತ ಅರ್ಥ ಎಂಬುದು ಶಾಸ್ತ್ರಮರ್ಯಾದೆ.  ಆದರೆ ಅಲ್ಲಿ ನಿಷೇಧಬೋಧಕ ಪದಗಳು ಇರುವುದಿಲ್ಲ.  ವಿಧಿರೂಪದ ಪದಗಳೇ ಇರುತ್ತವೆ.  ಲಕ್ಷಣೆಯಿಂದ ನಿಷೇಧಾರ್ಥವನ್ನು ಕಂಡುಕೊಳ್ಳಬೇಕು.  'ಪಂಚ ಪಂಚನಖಾಃ ಭಕ್ಷ್ಯಾಃ’ ಎಂಬೀ ವಾಕ್ಯದಲ್ಲಿ ಪರಿಸಂಖ್ಯೆಯಿದೆಯೆಂದು ಶಾಸ್ತ್ರಕಾರರು ಹೇಳಿದ್ದಾರೆ.  ನಮಗಿಲ್ಲಿ ನಿಷೇಧರೂಪದ ಅರ್ಥವು ಮೇಲ್ನೋಟಕ್ಕೆ ತೋರಿಬರುವುದೇ ಇಲ್ಲ.  ವಿಧಿರೂಪದ ಅರ್ಥ ಮಾತ್ರ ಕಂಡುಬರುತ್ತದೆ.  ಆದರೆ ಇದು ಸಂಸ್ಕೃತದ ಒಂದು ಶಿಸ್ತು.  ವಾಖ್ಯಾನಕಾರರು ಅಲ್ಲಲ್ಲಿ ಈ ಪರಿಸಂಖ್ಯೆಯನ್ನು ತೋರಿಸಿಕೊಡುತ್ತಾರೆ.  ‘ಧ್ವನಿಯಿಸುಗುಂ ಶಬ್ದದಿಂದಂ’ ಎಂಬಲ್ಲಿ ಮಾನ್ಯ ವ್ಯಾಖ್ಯಾನಕಾರರಿಗೆ ಇದು ಹೊಳೆಯಲಿಲ್ಲ.  ಹಾಗಾಗಿ ಇಲ್ಲಿ ಶ್ರೀವಿಜಯನ ವಿವಕ್ಷಿತ ಅರ್ಥವು ಮುಂದೆ ಬರಲೇ ಇಲ್ಲ.  ಕಂದದಲ್ಲೇ ಉಳಿಯಿತು.

‘ದ್ವಯೋಃ ಸಮುಚ್ಚಿತ್ಯ ಪ್ರಾಪ್ತೌ ಇತರನಿವ್ರುತ್ತಿಫಲಕೋ ವಿದಿಃ ಪರಿಸಂಖ್ಯಾ’ (9) ಎಂಬುದಾಗಿ ಪರಿಸಂಖ್ಯೆಯ ಸ್ವರೂಪವನ್ನು ಹೇಳುತ್ತಾರೆ.  ಶಬ್ದವು ಜ್ಞಾನಜನಕ, ಅರಿವನ್ನು ಮೂಡಿಸುವುದು ನುಡಿಯ ಕೆಲಸ ಎಂಬಂತಹ ತಿಳುವಳಿಕೆಯು ಸಂಸ್ಕಾರವು ಶಾಸ್ತ್ರ ಹಾಗೂ ಲೋಕವ್ಯವಹಾರಗಳಿಂದ ಪ್ರಸಿದ್ಧವಾಗಿತ್ತು.  ಈದೀಗ ಅಂದರೆ, ಶ್ರೀವಿಜಯನು ಕವಿರಾಜಮಾರ್ಗ ಕೃತಿಯನ್ನು ಬರೆದು ಮುಗಿಸಲಿರುವ ಹೊತ್ತಿಗೆ ‘ಅರ್ಥಃ ತಮರ್ಥಂ ವ್ಯನಕ್ತಿ’ ಎಂಬೀ ಧ್ವನಿಕಾವ್ಯಲಕ್ಷಣಕಾರಿಕೆಯ ಮಾತು ಅವನ ಕಿವಿಗೆ ಬಿತ್ತು.  ಪ್ರಾಸಂಗಿಕವಾಗಿ(10), ಅಂದರೆ ನೆನಪಾದುದನ್ನು ಹೇಳಲೇಬೇಕೆಂಬ ಒತ್ತಡದಿಂದ ಧ್ವನಿಯೆಂದರೆ ಅಲಂಕಾರಗಳಿಗಿಂತ ಬೇರೇನೂ ಅಲ್ಲ ಎಂಬುದಾಗಿ ಒಂದು ಮಾತು ಹೇಳಿದ.  ಅರ್ಥಧ್ವನನ ಕ್ರಿಯೆಯಲ್ಲಿ ಶಬ್ದ ಅರ್ಥ ಎಂಬೀ ಎರಡು ಸಾಧನಗಳು ಮಾಧ್ಯಮಗಳು, ಯುಗಪತ್, ಒಟ್ಟಿಗೆ ಪ್ರಾಪ್ತವಾದವು, ಅರಿವಿಗೆ ಬಂದವು.  ಈ ಎರಡು ಸಾಧನಗಳ ಪೈಕಿ ಧ್ವನನ ಕ್ರಿಯೆಯಲ್ಲಿ ಶಬ್ದವೊಂದೇ ಸಾಧನ ಸಾಕು ಎಂದು ಶಬ್ದವನ್ನು ಪುರಸ್ಕರಿಸಿ ‘ಧ್ವನಿಯಿಸುಗುಂ ಶಬ್ದದಿಂದಂ’ ಅರ್ಥದೆಯಲ್ತು ಎಂದು ಅರ್ಥಧ್ವನನ ಅಂದರೆ  ಧ್ವನನಕ್ರಿಯೆಯಲ್ಲಿ ಅರ್ಥಕ್ಕೆ ಸಾಧನತ್ವವನ್ನು ಶ್ರೀವಿಜಯನು ತಿರಸ್ಕರಿಸಿದ್ದಾನೆ.  ಹೀಗಿದು ಇಲ್ಲಿ ‘ಉಭಯಸ್ಯ ಯುಗಪತ್ ಪ್ರಾಪ್ತೌ ಧ್ವನನಕ್ರಿಯಾಯಾಂ ಅರ್ಥಸ್ಯ ಸಾಧನತ್ವವ್ಯಾವೃತ್ತಿಫಲಕ’ ವಾದಂತಾದ್ದರಿಂದ ಪರಿಸಂಖ್ಯೆಯೆಂದು ಹೇಳಲೇಬೇಕು.  ಶಬ್ದ ಅರ್ಥಗಳು ಪಾರ್ವತೀಪರಮೇಶ್ವರರಂತೆ ಅಂಟಿಕೊಂಡೇ ಇರುವ ಪದಾರ್ಥಗಳಾದ್ದರಿಂದ ಶಬ್ದದಿಂದಂ ಎಂಬಲ್ಲಿ ಅರ್ಥದಿಂದಂ, ಅರ್ಥದೆ ಎಂಬುದು ಅಲ್ಲಿ ಉಪಸ್ಥಿತವೇ, ಹಾಜರಾಗಿಯೇ ಇರುತ್ತದೆ.  ಶಬ್ದಕ್ಕೆ ಧ್ವನನಕ್ರಿಯೆಯಲ್ಲಿ ಅನ್ವಯ ಹೇಳಿದಂತಯೇ ಅರ್ಥದೆ ಎಂಬುದಕ್ಕೂ ಧ್ವನನಕ್ರಿಯೆಯಲ್ಲೇ ಅನ್ವಯ ಹೇಳಬೇಕೆಂಬುದು ಶಾಸ್ತ್ರೀಯವಾಗಿ ನ್ಯಾಯ್ಯಃ ಪಂಥಾಃ. ‘ಆಕಾಂಕ್ಷಾ ಯೋಗ್ಯತಾ ಸಂನಿಧಿಶ್ಚ ವಾಕ್ಯಾರ್ಥಜ್ಞಾನೇ ಹೇತುಃ(11). ಈ ಅನ್ವಯಸಾಮಗ್ರಿಯು ‘ಜ್ಞಾತಾ ಸತೀ’ ಕಾರಣವಾಗುತ್ತದೆಂದು ಹೇಳುತ್ತಾರೆ.  ಅರ್ಥೆದೆ ಎಂಬಲ್ಲಿ ತೃತೀಯಾಕ್ಕೆ- ತನಗೆಲ್ಲಿ ಅನ್ವಯ?- ಎಂಬಂತಹ ಆಕಾಂಕ್ಷೆಯಿದೆ.  ಹಿಂದಿನ ವಾಕ್ಯದಲ್ಲಿರುವ ಧ್ವನಿಯಿಸುಗುಂ ಕ್ರಿಯಾಪದವನ್ನು ಅರ್ಥದೆಯ ಮುಂದೆ ಅನುಷಂಗ ಮಾಡಿಕೊಂಡು ಪೂರ್ಣವಾಕ್ಯವನ್ನು ನೇರ್ಪಡಿಸಿಕೊಳ್ಳಬೇಕು.  ‘ಎಂಬುದು’ ಅಧ್ಯಾಹಾರ.  ಈ ಪರಿಪಾಟಿಯು  ವಾಕ್ಯವಾಕ್ಯಾರ್ಥವಿಶ್ಲೇಷಣೆಯ ಸಂದರ್ಭದಲ್ಲಿ ಶಾಸ್ತ್ರಕಾರರೇ ಹೇಳಿದ್ದು. ಲೋಕವ್ಯವಹಾರದಲ್ಲೂ ಇದು ಇದ್ದೇ ಇದೆ. ‘ಅರಿವನ್ನು ಮೂಡಿಸುವುದು ನುಡಿಯ ಕೆಲಸ’.  ಇದು ಪರಿಸಂಖ್ಯೆ. ‘ಪುರುಳಿನದಲ್ಲ’. ಇಲ್ಲಿ ಅನ್ವಯಸಾಮಗ್ರಿಯನ್ನು ಜೋಡಿಸಿಕೊಂಡು ‘ಅರಿವನ್ನು ಮೂಡಿಸುವುದು ಪುರುಳಿನ ಕೆಲಸವಲ್ಲ’ ಎಂಬೀ ಬಗೆಯಲ್ಲಿ ವಾಕ್ಯವನ್ನು ನೇರ್ಪಡಿಸಿಕೊಂಡು ಶಾಬ್ದಬೋಧ ಕಂಡುಕೊಳ್ಳಬೇಕು.  ಈ ಬಗೆಯ ಶಾಬ್ದಬೋಧ ಪ್ರಕ್ರಿಯೆಗಳು ಶ್ರೀವಿಜಯನ ಕಾಲದಲ್ಲಿನ್ನೂ ಮೈದಳೆದಿರಲಿಲ್ಲ ಎಂಬ ಮಾತು ಇಲ್ಲಿ ಕೇಳಿಬಂದಿದೆ. ಅವಚ್ಚೇದಕಾವಚ್ಛಿನ್ನಶೃಂಖಲೆಯ ಶಾಬ್ದಬೋಧಪ್ರಕ್ರಿಯೆಯು ಮಾತ್ರ ಅವನ ಕಾಲಕ್ಕಿಂತ ಮುಂದಿನದೆಂದು ಹೇಳಬಹುದೇ ಹೊರತು ಅನ್ವಯಸಾಮಗ್ರಿಯ ಬಳಕೆಯೆಂಬ ಈ ಚಿಕ್ಕ ಪರಿಭಾಷೆಯೂ ಅಂದು ಇರಲಿಲ್ಲಾಂತ ಹೇಳಲಾಗದು.  ಶಾಸ್ತ್ರಗಳು ಹುಟ್ಟಿದ ಮರುದಿನವೇ ಈ ಬಗೆಯ ಭಾಷಾಪರಿಕರಗಳೂ ಹುಟ್ಟಿವೆಯೆಂದೇ ಹೇಳಬಹುದು.

ದುಷ-ಮುಹ-ವ್ಯೆಚಿತ್ಯೇ, ವ್ಯೆಚಿತ್ಯಂ ಚಿತ್ತವಿಕ್ಲವಃ.  ವ್ರಜತಿ ವಿರಹೇ ವ್ಯೆಚಿತ್ಯಮ್.  ವ್ಯೆಚಿತ್ಯಂ ಭ್ರಾಂತಿರಿತಿ ಪರ್ಯವಸಿತೋsರ್ಥಃ.  ಅರ್ಥವೂ- ವ್ಯಂಜನಾವ್ರುತ್ತಿಯ ಅನ್ವಯದಿಂದ- ಅರ್ಥಾಂತರವನ್ನು ಧ್ವನಿಸುತ್ತದೆ ಎಂಬ ಮಾತು ಸರಿಯಲ್ಲ.  ಅರ್ಥದೆ ದೂಷ್ಯಂ ಎಂಬುದು ವ್ಯಜನೆಯ ನಿರಾಕರಣೆ.

ಧ್ವನಿಕಂದವೆಂಬುದೊಂದು ಸಂಸ್ಕೃತಹೂರಣದ ಕನ್ನಡಕಣಕದ ಸುಕ್ಕಿನುಂಡೆ.  ಹೂರಣವನ್ನು ಕೊಂಚ ತಾಳ್ಮೆಯೆಂದ ಎಳೆಎಳೆಯಾಗಿ ತೊಳೆತೊಳೆಯಾಗಿ ಬಿಡಿಬಿಡಿಯಾಗಿ ಬಿಡಿಸಿ ನೋಡಿ. ಜಾತ್ಯೇಕವಚನ, ಪರಿಸಂಖ್ಯಾ, ಅನ್ವಯಸಾಮಗ್ರಿ, ಗುಣೇತ್ವನ್ಯಾಯಕಲ್ಪನಾ, ಅರ್ಥಂ ಬುದ್ಧ್ಯಾ ಶಬ್ದರಚನಾ, ನಿಷೇಧಸ್ಯಪ್ರಾಪ್ತಿಪೂರ್ವಕತ್ವನಿಯಮಃ, ಉಭಯಪ್ರಾಪ್ತಿ, ಅನ್ಯತರನಿವೃತ್ತಿ, ಸಾಹಚರ್ಯನಿಯಮ, ನೆನೆ ಧಾತು ಪ್ರಯೋಗ, ಧ್ವನಿಕಾವ್ಯಲಕ್ಷಣಕಾರಿಕೆಯ ಹಿನ್ನೆಲೆ, ಧ್ವನ್ಯಲಂಕಾರವೆಂದರೆ ಶಬ್ದಾಲಂಕಾರವೆಂದರ್ಥ.  ಆಂತರ್ಭಾವವಾದವೂ ಕೂಡ ಧ್ವನಿಕಂದದ ಅರ್ಥ.  ‘ಧ್ವನಿ’ ಎಂಬ ಒಂದು ಅರ್ಥಾಲಂಕಾರ ಮಾತ್ರ ಇದರಲ್ಲಿ ನನಗೆ ಕಂಡುಬರಲ್ಲಿಲ್ಲ.  ಈ ಹೇಳಿದ ಎಲ್ಲ ಪರಿಕರಗಳೂ ಕೂಡ ಶಾಸ್ತ್ರೀಯ ಭಾಷೆಯ ಹತ್ಯಾರಗಳೇ ಸರಿ (12).


ಟಿಪ್ಪಣಿಗಳು:

1. ಗೂಡಾರ. ದೂಷ್ಯವೆಂದರೆ ಗೂಡಾರ, ಮುಸುಕು ಎಂಬುದಾಗಿ ಪ್ರೊ. ಟಿ. ಕೇಶವ ಭಟ್ಟರು ಒಂದು ಕಡೆ ಹೇಳಿದ್ದಾರೆ.
2. ಶ್ರೀಕುಮಾರಿಲ ಭಟ್ಟಪಾದರು.
3. ಭರ್ತೃಹರಿ, ವಾಕ್ಯಪದೀಯಂ, ಬ್ರಹ್ಹಕಾಂಡ 1-23.
4. ವಾಕ್ಯಪದೀಯ ಕನ್ನಡ ಅನುವಾದ, ವಿದ್ವಾನ್ ರಂಗನಾಥ ಶರ್ಮಾ, ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಪ್ರಕಟನೆ, 2011, ಪು.90
5. ಧ್ವನ್ಯಾಲೋಕ, 1-13
6. ಡಾ. ಕೆ. ಕೃಷ್ಣಮೂರ್ತಿ, ಕನ್ನಡ ಧ್ವನ್ಯಾಲೋಕ, ಪು. 26
7. ಕವಿರಾಜಮಾರ್ಗ, 3-209
8. ಪಂಪ, ಆದಿಪುರಾಣ, 19-119
9. ಮೀಮಾಂಸಾ ಪರಿಭಾಷಾ.
10. ಸ್ಮ್ರುತಸ್ಯ ಉಪೇಕ್ಷಾsನರ್ಹತ್ವಂ ಪ್ರಸಂಗಃ
  • ನೆನಪಾದುದನ್ನು ಹೇಳಿಯೇ ತೀರಬೇಕಾದ ಒತ್ತಡ.
11. ತರ್ಕಸಂಗ್ರಹಃ, ಶಬ್ದಖಂಢಃ
ಜಿಜ್ಞಾಸಾ ಜಾಯತೇ ಬೋದ್ಧುಃ ಸಂಬಂಧಿಷು ಯಥಾ ಯಥಾ
ತಥಾ ತಥ್ಯೆವ ಶಬ್ದಾನಾಮನ್ವಿತಾರ್ಥಾಭಿಧಾಯಿತಾ
  • ನಯನದ್ಯುಮಣಿಃ ಪು. 108 (ವೇದ ವಿಶ್ವವಿದ್ಯಾಲಯ, ತಿರುಪತಿ)
12. ಧ್ವನಿವಿರೋಧಿಗಳ ಮಾತುಗಳನ್ನು ಧ್ವನಿಕಂದದೊಡನೆ ಇಟ್ಟುಕೊಂಡು ಅವೆರಡರ ಶಬ್ದ ಅರ್ಥಗಳ ಹೋಲಿಕೆಗಳನ್ನು ತೂಗಿನೋಡಿ.  ಮುಕುಲ ಭಟ್ಟ, ಜಯಂತ ಭಟ್ಟರು ವ್ಯಂಜನೆಯನ್ನು ನಿರಾಕರಿಸುವಾಗ ಮಾರ್ಗಕಾರನ ಮಾತನ್ನೇ ಅನುವಾದಿಸಿದಂತಿದೆ.


(PUBLISHED IN NIINAASAM MAATUKATHE 119-120) (ನೀನಾಸಂ 119-120  ಮಾತುಕಥೆಯಲ್ಲಿ ಪ್ರಕಟಗೊಂಡಿದೆ).









ಪರಿಸಂಖ್ಯಾ ಪರಿಚಯ

ಪರಿಸಂಖ್ಯಾ ಪರಿಚಯ ವೇದದಲ್ಲಿರುವ ವಿಧಿವಾಕ್ಯಗಳ ಅರ್ಥವಿಶ್ಲೇಷಣೆಗಾಗಿ ಪೂರ್ವಮೀಮಾಂಸಶಾಸ್ತ್ರದಲ್ಲಿ ಅನೇಕಾನೇಕನ್ಯಾಯಗಳನ್ನು , ಕಟ್ಟಳೆಗಳನ್ನು ನಿಗದಿಪಡಿಸಿದ್ದಾರೆ ...